ಕೃಷ್ಣವರ್ಮ 1

ಕದಂಬ ವಂಶದ ಪ್ರಸಿದ್ಧ ದೊರೆ; ಕಾಕುತ್ಸ್ಥವರ್ಮನ ಮಗ. ಆಳ್ವಿಕೆಯ ಕಾಲ 430-460. ಕಾಕುತ್ಸ್ಥವರ್ಮ ರಾಜ್ಯವಾಳುತ್ತಿದ್ದಾಗ ಅವನ ರಾಜಧಾನಿಯಾದ ವೈಜಯಂತಿಯ ದಕ್ಷಿಣದ ಸಾಮಂತರು ದಂಗೆಯೇಳಲು ಅದನ್ನು ಅಡಗಿಸಲು ಅವನ ಹಿರಿಯ ಮಗ ಶಾಂತಿವರ್ಮ ಮತ್ತು ತನ್ನ ತಮ್ಮ ಕೃಷ್ಣವರ್ಮರನ್ನು ಅಲ್ಲಿಗೆ ಕಳುಹಿಸಿದ. ಕೃಷ್ಣವರ್ಮ ಆ ದಂಗೆಯನ್ನಡಗಿಸಿ ಶಾಂತಿಯನ್ನು ನೆಲೆಗೊಳಿಸಿ ತ್ರಿಪರ್ವತದಲ್ಲಿ (ಈಗಿನ ಹಳೇಬೀಡು ಅಥವಾ ಮುರ್ಗೋಡ್, ಬೆಳಗಾಂವಿ ಜಿಲ್ಲೆ) ನೆಲೆನಿಂತು ರಾಜ್ಯಭಾರ ಮಾಡತೊಡಗಿದ. ಶಾಂತಿವರ್ಮ ಜೀವಿಸಿರುವವರೆಗೂ ಕೃಷ್ಣವರ್ಮ ಅವನ ಸಾಮಂತನಾಗಿದ್ದ. ಬನವಾಸಿಯ ಸಿಂಹಾಸನಕ್ಕೆ ಮೃಗೇಶವರ್ಮ ಬಂದಾಗ ಈತ ಸ್ವಾತಂತ್ರ್ಯ ಘೋಷಿಸಿ ಕದಂಬ ಸಂತತಿಯ ನೂತನ ಶಾಖೆಯ ಸ್ಥಾಪಕನಾದ. ಇವನ ಆಡಳಿತದ ಎರಡು ಮುಖ್ಯ ಘಟನೆಗಳೆಂದರೆ ನಾಗರನ್ನು ಸೋಲಿಸಿದ್ದು ಮತ್ತು ನಣಕ್ಕಾಸ ಪಲ್ಲವನನ್ನು ಪರಾಭವಗೊಳಿಸಿದ್ದು. 1ನೆಯ ಕೃಷ್ಣವರ್ಮ ನಾಗರನ್ನು ಸೋಲಿಸಿ ಅವರಿಂದ ದಾಯವನ್ನು ಪಡೆದಿದ್ದನೆಂದು ದೇವಗಿರಿ ತಾಮ್ರ ಶಾಸನದಲ್ಲಿ ಹೇಳಲಾಗಿದೆ. ಈ ದೊರೆ ತನ್ನ ವಿಜಯಗಳ ಸಂಕೇತವಾಗಿ ಅಶ್ವಮೇಧಯಾಗ ಮಾಡಿದ. ಕೈಕೇಯ ಮನೆತನದ ಅರಸುಕುವರಿಯನ್ನು ಈತ ವಿವಾಹವಾದ. ಇವನಿಗೆ ವಿಷ್ಣುವರ್ಮ, ದೇವವರ್ಮ ಎಂಬ ಇಬ್ಬರು ಮಕ್ಕಳಿದ್ದರು. ಕೃಷ್ಣವರ್ಮನ ಮರಣಾನಂತರ ಅವನ ಮಗ ವಿಷ್ಣುವರ್ಮ ತ್ರಿಪರ್ವತಶಾಖೆಯ ಅರಸನಾದ.	    				
	 (ಎಂ.ವಿ.ಎಸ್.ಆರ್.; ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ